79 - An-Naazi'aat ()

|

(1) (ಅವಿಶ್ವಾಸಿಗಳೆಡೆಗೆ) ಇಳಿದು (ಅವರ ಆತ್ಮಗಳನ್ನು) ಹೊರಗೆಳೆಯುವವುಗಳ ಮೇಲಾಣೆ!

(2) (ಸತ್ಯವಿಶ್ವಾಸಿಗಳ ಆತ್ಮಗಳನ್ನು) ಸೌಮ್ಯವಾಗಿ ಹೊರಗೆಳೆಯುವವವುಗಳ ಮೇಲಾಣೆ!

(3) ರಭಸವಾಗಿ ಹರಿದು ಬರುವವುಗಳ ಮೇಲಾಣೆ!

(4) ತರುವಾಯ ಮುಂದಕ್ಕೆ ಜಿಗಿದು ಸಾಗುವವುಗಳ ಮೇಲಾಣೆ!

(5) ಕಾರ್ಯಗಳನ್ನು ನಿಯಂತ್ರಿಸುವವುಗಳ ಮೇಲಾಣೆ.(1345)
1345. ಒಂದರಿಂದ ಐದರವರೆಗಿನ ಸೂಕ್ತಿಗಳಲ್ಲಿರುವ ವಿಶೇಷಣಗಳೆಲ್ಲವೂ ಮಲಕ್‍ಗಳನ್ನು ಸೂಚಿಸುತ್ತವೆ ಎಂದು ಪ್ರಮುಖ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಾಹು ಅವನ ಸೃಷ್ಟಿಗಳ ಪೈಕಿ ಅವನಿಚ್ಛಿಸಿದವರ ಮೇಲೆ ಆಣೆಯಿಡುತ್ತಾನೆ.

(6) ಆ ಕಂಪಿಸುವ ಘಟನೆಯು ಕಂಪನವನ್ನುಂಟು ಮಾಡುವ ದಿನ!

(7) ಅದನ್ನು ಹಿಂಬಾಲಿಸಿ ಅದರ ಹಿಂದೆಯೇ ಬರುವ ಮತ್ತೊಂದು.(1346)
1346. ಇಲ್ಲಿರುವ ಸೂಚನೆಯು ಲೋಕಾಂತ್ಯದ ವೇಳೆ ಕಹಳೆಯಲ್ಲಿ ಮೊಳಗಿಸಲಾಗುವ ಎರಡು ಸಂದರ್ಭಗಳ ಬಗ್ಗೆಯಾಗಿದೆ.

(8) ಅಂದು ಕೆಲವು ಹೃದಯಗಳು ನಡುಗುತ್ತಿರುವುವು.

(9) ಅವುಗಳ ಕಣ್ಣುಗಳು ಕೆಳಭಾಗಕ್ಕೆ ತಗ್ಗಿರುವುವು.

(10) ಅವರು ಹೇಳುವರು: ‘ಖಂಡಿತವಾಗಿಯೂ ನಮ್ಮನ್ನು (ನಮ್ಮ) ಪೂರ್ವಸ್ಥಿತಿಗೆ ಮರಳಿಸಲಾಗುವುದೇ?

(11) ನಾವು ಶಿಥಿಲವಾದ ಮೂಳೆಗಳಾಗಿ ಹೋದ ಬಳಿಕವೂ (ನಮ್ಮನ್ನು ಮರಳಿಸಲಾಗುವುದೇ)?’

(12) ಅವರು ಹೇಳುವರು: ‘ಹಾಗಾದರೆ ಅದೊಂದು ನಷ್ಟ ತುಂಬಿದ ಮರಳುವಿಕೆಯಾಗಿರುವುದು’.

(13) ಅದು ಒಂದೇ ಒಂದು ಘೋರ ಶಬ್ದ ಮಾತ್ರವಾಗಿರುವುದು.

(14) ಆಗ ಅಗೋ! ಅವರು ಸಮತಟ್ಟಾದ ಬಯಲಲ್ಲಿರುವರು.(1347)
1347. ಎಲ್ಲರೂ ಗೋರಿಗಳಿಂದ ಹೊರಬಂದು ಸಮತಟ್ಟಾದ ಭೂಮುಖದ ಮೇಲೆ ಸಮ್ಮೇಳನಗೊಳ್ಳುವರು. ಲೋಕಾಂತ್ಯದೊಂದಿಗೆ ಭೂಮಿಯಲ್ಲಿರುವುದೆಲ್ಲವೂ ನಾಶವಾಗಿ ಭೂಮುಖವು ಒಂದು ಸಮತಟ್ಟಾದ ಬಯಲಾಗಿಬಿಡುವುದು. ಪುನರುತ್ಥಾನಗೊಂಡ ಮನುಷ್ಯರು ಅಲ್ಲಿ ಸಮ್ಮೇಳನಗೊಳ್ಳುವರು.

(15) ಮೂಸಾರ ವೃತ್ತಾಂತವು ತಮ್ಮ ಬಳಿಗೆ ಬಂದಿದೆಯೇ?

(16) ತುವಾ ಎಂಬ ಪವಿತ್ರ ಕಣಿವೆಯಲ್ಲಿ ಅವರ ರಬ್ ಅವರನ್ನು ಕರೆದು ಹೀಗೆಂದ ಸಂದರ್ಭ.

(17) ‘ತಾವು ಫಿರ್‍ಔನನ ಬಳಿಗೆ ಹೋಗಿರಿ. ಖಂಡಿತವಾಗಿಯೂ ಅವನು ಮಿತಿಮೀರಿರುವನು.

(18) ತರುವಾಯ ಹೀಗೆ ಕೇಳಿರಿ: ಪರಿಶುದ್ಧಿಯನ್ನು ಪಡೆಯಲು ತಾವು ಸಿದ್ಧರಿರುವಿರಾ?

(19) ನಾನು ತಮಗೆ ತಮ್ಮ ರಬ್‌ನೆಡೆಗಿರುವ ಹಾದಿಯನ್ನು ತೋರಿಸುವೆನು. ತರುವಾಯ ತಾವು ಭಯಪಡಲು (ಸಿದ್ಧರಿರುವಿರಾ?)

(20) ತರುವಾಯ ಅವರು (ಮೂಸಾ) ಅವನಿಗೆ ಆ ಮಹಾ ದೃಷ್ಟಾಂತವನ್ನು ತೋರಿಸಿಕೊಟ್ಟರು.(1348)
1348. ಅವರು ಕೆಳಗೆ ಹಾಕುವ ಬೆತ್ತ ಸರ್ಪವಾಗಿ ಮಾರ್ಪಡುವುದೇ ಆ ಮಹಾದೃಷ್ಟಾಂತವಾಗಿದೆ.

(21) ಆದರೆ ಅವನು ನಿಷೇಧಿಸಿದನು ಮತ್ತು ಧಿಕ್ಕರಿಸಿದನು.

(22) ತರುವಾಯ ಅವನು ವಿರುದ್ಧ ಶ್ರಮಗಳನ್ನು ನಡೆಸುವುದಕ್ಕಾಗಿ ಹಿಂದಿರುಗಿ ಹೋದನು.

(23) ತರುವಾಯ ಅವನು (ತನ್ನ ಜನರನ್ನು) ಒಟ್ಟುಗೂಡಿಸಿದನು. ಬಳಿಕ ಘೋಷಿಸಿದನು:

(24) ‘ನಾನು ನಿಮ್ಮ ಅತ್ಯುನ್ನತನಾದ ರಬ್ ಆಗಿರುವೆನು’ ಎಂದು ಅವನು ಹೇಳಿದನು.

(25) ಆಗ ಪರಲೋಕ ಮತ್ತು ಇಹಲೋಕದ ಶಿಕ್ಷೆಗಾಗಿ ಅಲ್ಲಾಹು ಅವನನ್ನು ಹಿಡಿದನು.

(26) ಖಂಡಿತವಾಗಿಯೂ ಭಯಪಡುವವರಿಗೆ ಅದರಲ್ಲಿ ಒಂದು ನೀತಿಪಾಠವಿದೆ.

(27) ಸೃಷ್ಟಿಸಲು ಅತಿಕ್ಲಿಷ್ಟಕರವಾಗಿರುವುದು ನಿಮ್ಮನ್ನೇ ಅಥವಾ ಆಕಾಶವನ್ನೇ? ಅವನು ಅದನ್ನು (ಆಕಾಶವನ್ನು) ನಿರ್ಮಿಸಿರುವನು.

(28) ಅದರ ಛಾವಣಿಯನ್ನು ಅವನು ಏರಿಸಿರುವನು ಮತ್ತು ಅದನ್ನು ವ್ಯವಸ್ಥಿತಗೊಳಿಸಿದನು.

(29) ಅದರ ರಾತ್ರಿಯನ್ನು ಅವನು ಕತ್ತಲನ್ನಾಗಿ ಮಾಡಿದನು ಮತ್ತು ಅದರ ಹಗಲನ್ನು ಅವನು ಪ್ರತ್ಯಕ್ಷಗೊಳಿಸಿದನು.

(30) ಅದರ ನಂತರ ಅವನು ಭೂಮಿಯನ್ನು ವಿಕಸನಗೊಳಿಸಿದನು.

(31) ಅದರಿಂದ ಅದರ ನೀರನ್ನೂ, ಸಸ್ಯಜಾಲಗಳನ್ನೂ ಅವನು ಹೊರತಂದನು.

(32) ಅವನು ಪರ್ವತಗಳನ್ನು ದೃಢವಾಗಿ ಸ್ಥಾಪಿಸಿದನು.

(33) ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಬಳಕೆಗಾಗಿ.(1349)
1349. ‘ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಬಳಕೆಗಾಗಿ’ ಎಂಬ ಸೂಕ್ತಿಯು 30-32 ಸೂಕ್ತಿಗಳ ಜೊತೆ ಸಂಬಂಧ ಹೊಂದಿದೆ.

(34) ಆದರೆ ಆ ಮಹಾ ವಿಪತ್ತು ಬರುವ ಸಂದರ್ಭ.

(35) ಅಂದರೆ ಮನುಷ್ಯನು ತಾನು ಪರಿಶ್ರಮಿಸಿ ಮಾಡಿಟ್ಟಿರುವುದರ ಬಗ್ಗೆ ಸ್ಮರಿಸುವ ದಿನ!

(36) ನೋಡುವವರಿಗಾಗಿ ನರಕಾಗ್ನಿಯನ್ನು ಬಹಿರಂಗ ಪಡಿಸಲಾಗುವ ದಿನ!

(37) ಮಿತಿಮೀರಿದವನು.

(38) ಮತ್ತು ಇಹಲೋಕ ಜೀವನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದವನು.

(39) ಖಂಡಿತವಾಗಿಯೂ ಜ್ವಲಿಸುವ ನರಕಾಗ್ನಿಯೇ (ಅಂದು ಅವನ) ವಾಸಸ್ಥಳವಾಗಿರುವುದು.

(40) ಆದರೆ ಯಾರು ತನ್ನ ರಬ್‌ನ ಸ್ಥಾನವನ್ನು(1350) ಭಯಪಡುವನೋ ಮತ್ತು ಮನಸ್ಸನ್ನು ದೇಹೇಚ್ಛೆಗಳಿಂದ ನಿಗ್ರಹಿಸುವನೋ,
1350. ಅಲ್ಲಾಹುವಿನ ಸ್ಥಾನ ಎಂದರೆ ಪುನರುತ್ಥಾನದ ದಿನ ಅಲ್ಲಾಹುವಿನ ಮುಂದೆ ವಿಚಾರಣೆಗೆ ಗುರಿಯಾಗುವ ಸ್ಥಾನ ಅಥವಾ ಆ ನಿಲ್ಲುವಿಕೆ ಎಂದು ಹೆಚ್ಚಿನ ವ್ಯಾಖ್ಯಾನಕಾರರು ವಿವರಿಸಿದ್ದಾರೆ.

(41) ಖಂಡಿತವಾಗಿಯೂ ಸ್ವರ್ಗವೇ (ಅವನಿಗಿರುವ) ವಾಸಸ್ಥಳವಾಗಿರುವುದು.

(42) ಆ ಅಂತ್ಯಘಳಿಗೆಯ ಬಗ್ಗೆ ‘ಅದು ಯಾವಾಗ ಸಂಭವಿಸುತ್ತದೆ?’ ಎಂದು ಅವರು ತಮ್ಮಲ್ಲಿ ಕೇಳುವರು.

(43) ಅದರ ಬಗ್ಗೆ ತಮಗೆ ಹೇಳಲಿಕ್ಕಿರುವುದಾದರೂ ಏನು?(1351)
1351. ಅಂತ್ಯದಿನವು ಕರಾರುವಾಕ್ಕಾಗಿ ಯಾವಾಗ ಸಂಭವಿಸಲಿದೆಯೆಂದು ಅಲ್ಲಾಹು ಪ್ರವಾದಿ(ಸ) ರಿಗೆ ತಿಳಿಸಿಕೊಟ್ಟಿಲ್ಲ ಎಂಬುದರ ಕಡೆಗೆ ಸೂಚನೆ.

(44) ಅದರ ಸಮಾಪ್ತಿಯು ತಮ್ಮ ರಬ್‌ನೆಡೆಗಾಗಿದೆ.

(45) ತಾವು ಅದನ್ನು ಭಯಪಡುವವರಿಗಿರುವ ಒಬ್ಬ ಮುನ್ನೆಚ್ಚರಿಕೆಗಾರರು ಮಾತ್ರವಾಗಿರುವಿರಿ.

(46) ಅವರು ಅದನ್ನು ಕಾಣುವ ದಿನ ಒಂದು ಸಂಜೆ ಅಥವಾ ಒಂದು ಮುಂಜಾನೆಯ ವಿನಾ ಅವರು (ಇಲ್ಲಿ) ತಂಗಿರಲೇ ಇಲ್ಲ ಎಂಬಂತೆ (ಅವರಿಗೆ ಭಾಸವಾಗುವುದು).