(1) ಅವರು (ಪ್ರವಾದಿಯವರು) ಮುಖವನ್ನು ಸಿಂಡರಿಸಿ ವಿಮುಖರಾದರು.
(2) ತಮ್ಮ ಬಳಿಗೆ ಆ ಅಂಧ ವ್ಯಕ್ತಿ ಬಂದ ಕಾರಣದಿಂದ.
(3) (ಓ ಪ್ರವಾದಿಯವರೇ!) ತಮಗೇನು ಗೊತ್ತು? ಅವರು (ಅಂಧ ವ್ಯಕ್ತಿ) ಬಹುಶಃ ಪರಿಶುದ್ಧತೆಯನ್ನು ಪಡೆಯಲೂ ಬಹುದು.
(4) ಅಥವಾ ಉಪದೇಶ ಪಡೆದು, ಆ ಉಪದೇಶವು ಅವರಿಗೆ ಪ್ರಯೋಜನಪಡಲೂ ಬಹುದು.
(5) ಆದರೆ ಯಾರು ಸ್ವಯಂ ಪರ್ಯಾಪ್ತತೆಯನ್ನು ತೋರಿಸಿದನೋ.
(6) ತಾವು ಅವನೆಡೆಗೆ ಗಮನ ಹರಿಸುತ್ತಿರುವಿರಿ.
(7) ಅವನು ಪರಿಶುದ್ಧತೆಯನ್ನು ಪಡೆಯದಿರುವುದರಲ್ಲಿ ತಮಗಿರುವ ದೋಷವಾದರೂ ಏನು?
(8) ಆದರೆ ತಮ್ಮ ಬಳಿಗೆ ಓಡಿ ಬಂದವರು ಯಾರೋ,
(9) ಅಲ್ಲಾಹುವನ್ನು ಭಯಪಡುತ್ತಾ,
(10) ಅವರ ವಿಷಯದಲ್ಲಿ ತಾವು ಅಸಡ್ಡೆ ತೋರುತ್ತಿರುವಿರಿ.(1352)
1352. ಒಮ್ಮೆ ಪ್ರವಾದಿ(ಸ) ರವರು ಕೆಲವು ಕುರೈಶೀ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅವರು ಇಸ್ಲಾಮ್ ಸ್ವೀಕರಿಸುವರೆಂಬ ನಿರೀಕ್ಷೆ ಪ್ರವಾದಿ(ಸ) ರಿಗಿತ್ತು. ಆ ಸಂದರ್ಭದಲ್ಲಿ ಅಂಧ ಸಹಾಬಿಯಾದ ಅಬ್ದುಲ್ಲಾಹ್ ಇಬ್ನ್ ಉಮ್ಮಿ ಮಕ್ತೂಮ್(ರ) ಎಂಬವರು ಇಸ್ಲಾಮಿನ ಬಗ್ಗೆ ಕಲಿಯಲಿಕ್ಕಾಗಿ ಪ್ರವಾದಿ(ಸ) ರವರ ಬಳಿಗೆ ಬಂದರು. ಆ ಬಡಪಾಯಿ ಅಂಧ ಸಹಾಬಿಗೆ ಮಹತ್ವ ನೀಡಿದರೆ ಅದು ಕುರೈಶೀ ನಾಯಕರಿಗೆ ಅಪ್ರಿಯವೆನಿಸಿ ಅವರು ಇಸ್ಲಾಮ್ ಸ್ವೀಕರಿಸುವುದರಿಂದ ಹಿಂದೆ ಸರಿಯುವರೋ ಎಂಬ ಭಯ ನಿಮ್ಮಿತ್ತ ಪ್ರವಾದಿ(ಸ) ರವರು ಆ ಅಂಧ ಸಹಾಬಿಯ ಆಗಮನದ ಬಗ್ಗೆ ಅಸಂತೃಪ್ತಿ ಸೂಚಿಸಿದರು. ಅದು ಸರಿಯಲ್ಲವೆಂದು ಸೂಚಿಸುತ್ತಾ ಈ ಸೂಕ್ತಿಗಳು ಅವತೀರ್ಣಗೊಂಡವು. ಕುರ್‌ಆನ್ ಪ್ರವಾದಿ(ಸ) ರವರ ಸ್ವಂತ ಕೃತಿಯಲ್ಲ ಮತ್ತು ಅದರಲ್ಲಿ ಏನಾದರೂ ಸೇರಿಸಲು ಅಥವಾ ಕಡಿತಗೊಳಿಸಲು ಅವರಿಗೆ ಅಧಿಕಾರವಿಲ್ಲ ಎಂಬುದಕ್ಕೆ ಈ ಸೂಕ್ತಿಗಳು ಪುರಾವೆಯಾಗಿವೆ.
(11) ಅನುಮಾನವೇ ಇಲ್ಲ. ಖಂಡಿತವಾಗಿಯೂ ಇದು (ಕುರ್‌ಆನ್) ಒಂದು ಉಪದೇಶವಾಗಿದೆ.
(12) ಆದ್ದರಿಂದ ಯಾರು ಇಚ್ಛಿಸುವನೋ ಅವನು ಅದನ್ನು ಸ್ಮರಿಸಲಿ.
(13) ಅದು ಆದರಣೀಯವಾದ ಕೆಲವು ದಾಖಲೆಗಳಲ್ಲಿವೆ.(1353)
1353. ಆಕಾಶಲೋಕದಲ್ಲಿ ಅಲ್ಲಾಹುವಿನ ಸೂಕ್ತಿಗಳನ್ನು ಲಿಖಿತಗೊಳಿಸಲಾಗಿರುವ ಸುಭದ್ರ ದಾಖಲೆಗಳ ಬಗ್ಗೆ ಇಲ್ಲಿ ಸೂಚಿಸಲಾಗಿದೆಯೆಂದು ಪ್ರಮುಖ ವ್ಯಾಖ್ಯಾನಕಾರರು ಹೇಳಿದ್ದಾರೆ.
(14) ಔನ್ನತ್ಯ ನೀಡಲಾದ ಮತ್ತು ಪರಿಶುದ್ಧಗೊಳಿಸಲಾದ.
(15) ಅದು ಕೆಲವು ದೂತರ ಕೈಗಳಲ್ಲಿವೆ.
(16) ಗೌರವಾನ್ವಿತರೂ, ಪುಣ್ಯವಂತರೂ ಆಗಿರುವ.
(17) ಮನುಷ್ಯನು ನಾಶವಾಗಲಿ! ಅವನು ಇಷ್ಟೊಂದು ಕೃತಘ್ನನಾಗಲು ಕಾರಣವೇನು?
(18) ಅಲ್ಲಾಹು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿರುವನು?
(19) ಒಂದು ವೀರ್ಯಕೋಶದಿಂದ ಅವನನ್ನು ಸೃಷ್ಟಿಸಿ, ತರುವಾಯ ಅವನನ್ನು (ಅವನ ವಿಷಯವನ್ನು) ನಿರ್ಣಯಿಸಿದನು.
(20) ತರುವಾಯ ಅವನು ಮಾರ್ಗವನ್ನು ಸುಗಮಗೊಳಿಸಿದನು.
(21) ತರುವಾಯ ಅವನನ್ನು ಮೃತಪಡಿಸಿದನು ಮತ್ತು ಗೋರಿಯಲ್ಲಿ ದಫನ ಮಾಡಿಸಿದನು.
(22) ತರುವಾಯ ಅವನು ಇಚ್ಛಿಸುವಾಗ ಅವನು ಅವನನ್ನು ಪುನರುತ್ಥಾನಗೊಳಿಸುವನು.
(23) ಇಲ್ಲ, ಅಲ್ಲಾಹು ಅವನೊಂದಿಗೆ ಆದೇಶಿಸಿರುವುದನ್ನು ಅವನು ನಿರ್ವಹಿಸಲಿಲ್ಲ.
(24) ಆದರೆ ಮನುಷ್ಯನು ತನ್ನ ಆಹಾರದೆಡೆಗೆ ನೋಡಲಿ.
(25) ನಾವು ರಭಸವಾಗಿ ಮಳೆಯನ್ನು ಸುರಿಸಿದೆವು.
(26) ತರುವಾಯ ನಾವು ಭೂಮಿಯನ್ನು ಒಂದು ವಿಧದಲ್ಲಿ ಸೀಳಿದೆವು.(1354)
1354. ಮಳೆಯಿಂದ ಒದ್ದೆಯಾದ ಭೂಮಿಯನ್ನು ಸೀಳಿಕೊಂಡು ಮೊಳಕೆಯೊಡೆಯುವ ಸಸ್ಯಜಾಲಗಳ ಮುಖಾಂತರ ಸರ್ವ ಜೀವರಾಶಿಗಳಿಗೂ ಆಹಾರ ಲಭ್ಯವಾಗುತ್ತದೆ.
(27) ತರುವಾಯ ಅದರಲ್ಲಿ ನಾವು ಧಾನ್ಯವನ್ನು ಬೆಳೆಸಿದೆವು.
(28) ದ್ರಾಕ್ಷಿ ಮತ್ತು ತರಕಾರಿಗಳನ್ನು,
(29) ಆಲಿವ್ ಮತ್ತು ಖರ್ಜೂರ ಮರಗಳನ್ನು,
(30) ದಟ್ಟವಾಗಿರುವ ತೋಟಗಳನ್ನು.
(31) ಫಲಗಳನ್ನು ಮತ್ತು ಹುಲ್ಲುಗಳನ್ನು.
(32) ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಬಳಕೆಗಾಗಿ.
(33) ಆದರೆ ಕಿವಿಯನ್ನಪ್ಪಳಿಸುವ ಆ ಶಬ್ದವು ಬಂದಾಗ.
(34) ಅಂದರೆ ಮನುಷ್ಯನು ತನ್ನ ಸಹೋದರನಿಂದ ದೂರ ಓಡುವ ದಿನ!
(35) ತಾಯಿ ಮತ್ತು ತಂದೆಯಿಂದ.
(36) ಪತ್ನಿ ಮತ್ತು ಮಕ್ಕಳಿಂದ.
(37) ಆ ದಿನದಂದು ಅವರ ಪೈಕಿ ಪ್ರತಿಯೊಬ್ಬ ವ್ಯಕ್ತಿಗೂ ಇತರರೆಡೆಗೆ ಗಮನಕೊಡದಷ್ಟು ತನ್ನದೇ ಆದ (ಚಿಂತನಾ) ವಿಷಯಗಳಿರುವುವು.(1355)
1355. ಅಂತ್ಯದಿನದಂದು ಪ್ರತಿಯೊಬ್ಬ ಮನುಷ್ಯನೂ ಅತ್ಯಂತ ಭಯಭೀತನಾಗಿರುವನು. ತನ್ನ ಭವಿಷ್ಯದ ಬಗ್ಗೆಯಿರುವ ಭಯದ ನಿಮಿತ್ತ ಇತರರ ಬಗ್ಗೆ ಚಿಂತಿಸಲು ಅಥವಾ ಇತರರ ಸಮಸ್ಯೆಗಳನ್ನು ಆಲಿಸಲು ಅವನಿಗೆ ಬಿಡುವು ಇರಲಾರದು.
(38) ಅಂದು ಕೆಲವು ಮುಖಗಳು ಪ್ರಸನ್ನವಾಗಿರುವುವು.
(39) ನಗುತ್ತಲೂ, ಸಂತಸದಿಂದಲೂ ಇರುವುವು.
(40) ಅಂದು ಬೇರೆ ಕೆಲವು ಮುಖಗಳಿಗೆ ಧೂಳು ಆವರಿಸಿಕೊಂಡಿರುವುದು.
(41) ಅವುಗಳನ್ನು ಕಾರ್ಗತ್ತಲೆಯು ಕವಿದಿರುವುದು.
(42) ಅವಿಶ್ವಾಸಿಗಳು ಮತ್ತು ಧಿಕ್ಕಾರಿಗಳು ಅವರೇ ಆಗಿರುವರು.