81 - At-Takwir ()

|

(1) ಸೂರ್ಯನನ್ನು ಸುತ್ತಿ ಹೊದಿಯಲಾಗುವಾಗ.(1356)
1356. ಸೂರ್ಯನು ಪ್ರಕಾಶರಹಿತನಾಗುವಾಗ ಎಂದರ್ಥ.

(2) ನಕ್ಷತ್ರಗಳು ಉದುರಿ ಬೀಳುವಾಗ.

(3) ಪರ್ವತಗಳು ಚಲಿಸಲ್ಪಡುವಾಗ.

(4) ಪೂರ್ಣ ಗರ್ಭಿಣಿಗಳಾದ ಒಂಟೆಗಳನ್ನು ನಿರ್ಲಕ್ಷಿಸಲಾಗುವಾಗ.(1357)
1357. ಪೂರ್ಣ ಗರ್ಭಿಣಿ ಒಂಟೆಗಳು ಅರಬರ ಪಾಲಿಗೆ ಅತ್ಯಂತ ಅಮೂಲ್ಯವಾದ ಸಂಪತ್ತಾಗಿದ್ದವು. ಅಂತ್ಯದಿನದಂದು ಅವುಗಳನ್ನು ತಿರುಗಿ ನೋಡಲೂ ಜನರಿರಲಾರರು ಎಂದರ್ಥ.

(5) ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.(1358)
1358. ಅಂತ್ಯದಿನದಂದು ವಿಭ್ರಾಂತಿಯಿಂದಾಗಿ ವನ್ಯ ಮೃಗಗಳೆಲ್ಲವೂ ಒಂದೊಂದು ಕೇಂದ್ರಗಳಲ್ಲಿ ಒಟ್ಟುಗೂಡಲಿವೆ ಮತ್ತು ಯಾರ ಮೇಲೂ ದಾಳಿ ಮಾಡಲು ಅವು ಆಸಕ್ತಿ ತೋರಲಾರವು ಎಂಬುದು ಇಲ್ಲಿನ ಉದ್ದೇಶವಾಗಿರಬಹುದು.

(6) ಸಮುದ್ರಗಳನ್ನು ಧಗಧಗನೆ ಉರಿಸಲಾಗುವಾಗ.(1359)
1359. ‘ಸಜ್ಜರ’ ಎಂದರೆ ಧಗಧಗನೆ ಉರಿಸಿದನು, ಕೊತಕೊತನೆ ಕುದಿಯುವಂತೆ ಮಾಡಿದನು ಇತ್ಯಾದಿ ಅರ್ಥಗಳಿವೆ.

(7) ಆತ್ಮಗಳನ್ನು ಜೋಡಿಸಲಾಗುವಾಗ.(1360)
1360. ಸಜ್ಜನರನ್ನು ಸಜ್ಜನರೊಂದಿಗೆ ಮತ್ತು ದುರ್ಜನರನ್ನು ದುರ್ಜನರೊಂದಿಗೆ ಒಟ್ಟುಗೂಡಿಸಲ್ಪಡುವಾಗ ಎಂದು ಕೆಲವರು ಈ ಸೂಕ್ತಿಗೆ ಅರ್ಥ ನೀಡಿದ್ದಾರೆ.

(8) (ಜೀವಂತ) ಹೂಳಲಾದ ಹೆಣ್ಣುಶಿಶುವಿನೊಂದಿಗೆ ಕೇಳಲಾಗುವಾಗ.

(9) ಅವಳನ್ನು ಯಾವ ತಪ್ಪಿಗಾಗಿ ಹತ್ಯೆ ಮಾಡಲಾಯಿತೆಂದು.

(10) (ಕರ್ಮಗಳನ್ನು ದಾಖಲಿಸಲಾದ) ಗ್ರಂಥಗಳನ್ನು ತೆರೆದಿಡಲಾಗುವಾಗ.

(11) ಆಕಾಶಲೋಕವನ್ನು ಪರದೆ ಸರಿಸಿ ತೋರಿಸಲಾಗುವಾಗ.

(12) ಜ್ವಲಿಸುವ ನರಕಾಗ್ನಿಯನ್ನು ಧಗಧಗನೆ ಉರಿಸಲಾಗುವಾಗ.

(13) ಸ್ವರ್ಗವನ್ನು ಸಮೀಪಕ್ಕೆ ತರಲಾಗುವಾಗ.

(14) ಪ್ರತಿಯೊಬ್ಬ ವ್ಯಕ್ತಿಯೂ ತಾನು ಸಿದ್ಧಪಡಿಸಿ ತಂದಿರುವುದೇನೆಂಬುದನ್ನು ಅರಿತುಕೊಳ್ಳುವನು.(1361)
1361. ಪುನರುತ್ಥಾನ ದಿನದಂದು ಕರ್ಮ ದಾಖಲೆಯು ಕೈಯಲ್ಲಿ ನೀಡಲಾಗುವಾಗ ಇಹಲೋಕದಲ್ಲಿ ತಾನು ಮಾಡಿದ್ದು ಪರಲೋಕದಲ್ಲಿ ಸತ್ಫಲಗಳನ್ನು ನೀಡುವ ಸತ್ಕರ್ಮಗಳಾಗಿವೆಯೇ ಅಥವಾ ಪರಲೋಕದಲ್ಲಿ ದುಷ್ಫಲಗಳನ್ನು ನೀಡುವ ದುಷ್ಕರ್ಮಗಳನ್ನಾಗಿವೆಯೇ ಎಂದು ಪ್ರತಿಯೊಬ್ಬರೂ ಅರಿತುಕೊಳ್ಳುವರು.

(15) ಅಪ್ರತ್ಯಕ್ಷವಾಗುವವುಗಳ (ನಕ್ಷತ್ರಗಳ) ಮೇಲೆ ನಾನು ಆಣೆಯಿಟ್ಟು ಹೇಳುವೆನು.

(16) ಹಿಂದಕ್ಕೆ ಸರಿಯುತ್ತಲೂ, ಚಲಿಸುತ್ತಲೂ ಇರುವವುಗಳ ಮೇಲೆ.

(17) ರಾತ್ರಿಯು ಸರಿಯುವಾಗ ಅದರ ಮೇಲೆ.

(18) ಪ್ರಭಾತವು ಅರಳುವಾಗ ಅದರ ಮೇಲೆ ಆಣೆ ಹಾಕಿ ಹೇಳುವೆನು.

(19) ಖಂಡಿತವಾಗಿಯೂ ಇದು (ಈ ಕುರ್‌ಆನ್) ಗೌರವಾನ್ವಿತರಾದ ಒಬ್ಬ ದೂತರ(1362) ಮಾತಾಗಿದೆ.
1362. ಇಲ್ಲಿ ದೂತರು ಎಂದರೆ ಪ್ರವಾದಿ(ಸ) ರಿಗೆ ಅಲ್ಲಾಹುವಿನಿಂದ ಸಂದೇಶಗಳನ್ನು ತಲುಪಿಸಿಕೊಡುವ ಜಿಬ್ರೀಲ್(ಅ) ಎಂಬ ಮಲಕ್ ಆಗಿದ್ದಾರೆ.

(20) ಬಲಿಷ್ಠರೂ, ಸಿಂಹಾಸನದ ಅಧಿಪತಿಯಾದ ಅಲ್ಲಾಹುವಿನ ಬಳಿ ಪದವಿಯುಳ್ಳವರೂ ಆಗಿರುವ.

(21) ಅನುಸರಿಸಲ್ಪಡುವವರೂ, ವಿಶ್ವಾಸಯೋಗ್ಯರೂ ಆಗಿರುವ (ದೂತರು).

(22) ಖಂಡಿತವಾಗಿಯೂ ನಿಮ್ಮ ಒಡನಾಡಿ (ಪ್ರವಾದಿ) ಒಬ್ಬ ಹುಚ್ಚರಲ್ಲ.

(23) ಖಂಡಿತವಾಗಿಯೂ ಅವರು ಅವರನ್ನು (ಜಿಬ್ರೀಲ್‌ರನ್ನು) ಪ್ರತ್ಯಕ್ಷ ಕ್ಷಿತಿಜದಲ್ಲಿ ಕಂಡಿರುವರು.

(24) ಅವರು ಅಗೋಚರ ವಿಷಯಗಳ ಬಗ್ಗೆ ಜಿಪುಣತನ ತೋರಿಸುವವರಲ್ಲ.(1363)
1363. ಜನರಿಗೆ ತಿಳಿಸಿಕೊಡಬೇಕೆಂದು ಅಲ್ಲಾಹು ಪ್ರವಾದಿ(ಸ) ರಿಗೆ ವಹಿಸಿಕೊಟ್ಟ ಅಗೋಚರ ಜ್ಞಾನಗಳನ್ನು ಅವರು ಒಂದಿಷ್ಟೂ ಕಡಿತಗೊಳಿಸದೆ ಕರಾರುವಾಕ್ಕಾಗಿ ತಿಳಿಸಿಕೊಟ್ಟಿದ್ದಾರೆ ಎಂದರ್ಥ.

(25) ಇದು (ಕುರ್‌ಆನ್) ಬಹಿಷ್ಕೃತನಾದ ಸೈತಾನನ ಮಾತಲ್ಲ.

(26) ಆದರೂ ತಾವು ಎತ್ತ ಹೋಗುತ್ತಿರುವಿರಿ?

(27) ಇದು ಸರ್ವಲೋಕದ ಜನರಿಗಿರುವ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.

(28) ಅಂದರೆ ನಿಮ್ಮ ಪೈಕಿ ನೇರವಾಗಿ ನೆಲೆಗೊಳ್ಳಲು ಇಚ್ಛಿಸುವವರಿಗಾಗಿ.

(29) ಸರ್ವಲೋಕಗಳ ರಬ್ ಆದ ಅಲ್ಲಾಹು ಇಚ್ಛಿಸಿದ ಹೊರತು ನೀವು ಇಚ್ಛಿಸಲಾರಿರಿ.(1364)
1364. ಅಲ್ಲಾಹುವಿನ ತೀರ್ಮಾನಕ್ಕೆ ವಿರುದ್ಧವಾಗಿ ಯಾವುದೇ ತೀರ್ಮಾನ ಕೈಗೊಳ್ಳಲೂ ಮನುಷ್ಯನಿಗೆ ಸಾಧ್ಯವಿಲ್ಲ.