(1) ಆಕಾಶವು ಒಡೆದು ಹೋಗುವಾಗ.
(2) ನಕ್ಷತ್ರಗಳು ಉದುರಿ ಬೀಳುವಾಗ.
(3) ಸಮುದ್ರಗಳನ್ನು ಉಕ್ಕಿ ಹರಿಸಲಾಗುವಾಗ.
(4) ಗೋರಿಗಳನ್ನು ಬುಡಮೇಲುಗೊಳಿಸಲಾಗುವಾಗ.
(5) ಪ್ರತಿಯೊಬ್ಬ ವ್ಯಕ್ತಿಯೂ ತಾನು ಪೂರ್ವಭಾವಿಯಾಗಿ ಮಾಡಿಟ್ಟಿರುವುದನ್ನು ಮತ್ತು ಹಿಂದಕ್ಕೆ ಸರಿಸಿಟ್ಟಿರುವುದನ್ನು ಅರಿತುಕೊಳ್ಳುವನು.
(6) ಓ ಮನುಷ್ಯನೇ! ಉದಾರಿಯಾದ ನಿನ್ನ ರಬ್‌ನ ವಿಷಯದಲ್ಲಿ ನಿನ್ನನ್ನು ವಂಚಿಸಿದ್ದಾದರೂ ಏನು?(1365)
1365. ನಿನ್ನ ರಬ್ ತನ್ನ ಅನುಗ್ರಹಗಳನ್ನು ನಿನಗೆ ಉದಾರವಾಗಿ ನೀಡಿಯೂ ಸಹ ಯಾರ ವಂಚನೆಗೆ ಬಲಿಯಾಗಿ ನೀನು ಅವನನ್ನು ನಿಷೇಧಿಸಿ ಮಿಥ್ಯಾರಾಧ್ಯರನ್ನು ಪೂಜಿಸುತ್ತಿರುವೆ? ಎಂದರ್ಥ.
(7) ಅವನು ನಿನ್ನನ್ನು ಸೃಷ್ಟಿಸಿದನು, ನಿನ್ನನ್ನು ರೂಪಿಸಿದನು ಮತ್ತು ನಿನ್ನನ್ನು ಸರಿಯಾದ ಸ್ಥಿತಿಯಲ್ಲಾಗಿಸಿದನು.
(8) ಅವನಿಚ್ಛಿಸಿದ ರೂಪದಲ್ಲಿ ಅವನು ನಿನ್ನನ್ನು ರಚಿಸಿದನು.
(9) ಇಲ್ಲ, ಆದರೆ ನೀವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿರುವಿರಿ.
(10) ಖಂಡಿತವಾಗಿಯೂ ನಿಮ್ಮ ಮೇಲೆ ಕೆಲವು ಮೇಲ್ನೋಟ ವಹಿಸುವವರಿರುವರು.
(11) ದಾಖಲಿಸುತ್ತಿರುವ ಕೆಲವು ಗೌರವಾನ್ವಿತರು.(1366)
1366. ಅಲ್ಲಾಹುವಿನ ಅಪ್ಪಣೆ ಪ್ರಕಾರ ಪ್ರತಿಯೊಬ್ಬ ಮನುಷ್ಯನ ಮಾತು ಮತ್ತು ಕೃತಿಯನ್ನು ದಾಖಲಿಸಿಕೊಳ್ಳುವ ಮಲಕ್‍ಗಳು.
(12) ನೀವು ಮಾಡುವುದೆಲ್ಲವನ್ನೂ ಅವರು ಅರಿಯುವರು.
(13) ಖಂಡಿತವಾಗಿಯೂ ಪುಣ್ಯವಂತರು ಸುಖಾನುಭೂತಿಯಲ್ಲಿರುವರು.
(14) ಖಂಡಿತವಾಗಿಯೂ ದುಷ್ಕರ್ಮಿಗಳು ಜ್ವಲಿಸುವ ನರಕಾಗ್ನಿಯಲ್ಲಿರುವರು.
(15) ಪ್ರತಿಫಲ ದಿನದಂದು ಅವರು ಅದರಲ್ಲಿ ಪ್ರವೇಶಿಸಿ ಉರಿಯುವರು.
(16) ಅವರಿಗೆ ಅದರಿಂದ ಅನುಪಸ್ಥಿತರಾಗಲು ಸಾಧ್ಯವಾಗದು.
(17) ಪ್ರತಿಫಲದ ದಿನ ಎಂದರೆ ಏನೆಂದು ತಮಗೆ ಗೊತ್ತಿದೆಯೇ?
(18) ಪುನಃ, ಪ್ರತಿಫಲದ ದಿನ ಎಂದರೆ ಏನೆಂದು ತಮಗೆ ಗೊತ್ತಿದೆಯೇ?
(19) ಇನ್ನೊಬ್ಬನಿಗಾಗಿ ಏನನ್ನೂ ಅಧೀನಪಡಿಸಲು ಯಾರಿಗೂ ಸಾಧ್ಯವಾಗದ ದಿನ! ಅಂದು ಕಾರ್ಯನಿರ್ವಹಣೆಯ ಅಧಿಕಾರವು ಅಲ್ಲಾಹುವಿಗಾಗಿರುವುದು.