83 - Al-Mutaffifin ()

|

(1) ಅಳವಿನಲ್ಲಿ ಕಡಿಮೆ ಮಾಡುವವರಿಗೆ ಮಹಾ ನಾಶವಿದೆ.

(2) ಅವರು ಜನರಿಂದ ಅಳೆದು ಪಡೆಯುವಾಗ ಪೂರ್ಣವಾಗಿ ಪಡೆಯುವವರು.

(3) ಆದರೆ ಜನರಿಗೆ ಅಳೆದು ಕೊಡುವಾಗ ಅಥವಾ ತೂಕ ಮಾಡಿ ಕೊಡುವಾಗ ಕಡಿಮೆ ಮಾಡುವರು.

(4) ತಮ್ಮನ್ನು ಪುನರುತ್ಥಾನಗೊಳಿಸಲಾಗುವುದು ಎಂದು ಅವರು ವಿಶ್ವಾಸವಿಡುವುದಿಲ್ಲವೇ?

(5) ಭಯಾನಕವಾದ ಒಂದು ದಿನಕ್ಕಾಗಿ.

(6) ಸರ್ವಲೋಕಗಳ ರಬ್‌ನೆಡೆಗೆ ಜನರು ಎದ್ದುಬರುವ ದಿನ!

(7) ಅನುಮಾನವೇ ಇಲ್ಲ. ದುಷ್ಕರ್ಮಿಗಳ ದಾಖಲೆಯು ಸಿಜ್ಜೀನ್‍ನಲ್ಲೇ ಇರುವುದು.

(8) ಸಿಜ್ಜೀನ್ ಎಂದರೆ ಏನೆಂದು ತಮಗೆ ಗೊತ್ತಿದೆಯೇ?

(9) ಅದು ಲಿಖಿತಗೊಳಿಸಲಾದ ಒಂದು ಗ್ರಂಥವಾಗಿದೆ.(1367)
1367. ಸರ್ವ ದುಷ್ಕರ್ಮಿಗಳ ಕರ್ಮಗಳನ್ನು ದಾಖಲಿಸಲಾದ ದಾಖಲೆಗಳ ಸಂಗ್ರಹವಾಗಿದೆ ಸಿಜ್ಜೀನ್ ಎಂದು ಅನೇಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ..

(10) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(11) ಅಂದರೆ ಪ್ರತಿಫಲ ದಿನವನ್ನು ನಿಷೇಧಿಸುವ ವರಿಗೆ.

(12) ಸರ್ವ ಮಿತಿಮೀರಿದ ಮತ್ತು ಮಹಾಪಾಪಿಯಾಗಿರುವವರ ಹೊರತು ಯಾರೂ ಅದನ್ನು ನಿಷೇಧಿಸಲಾರರು.

(13) ಅವನಿಗೆ ನಮ್ಮ ದೃಷ್ಟಾಂತಗಳನ್ನು ಓದಿಕೊಡಲಾದರೆ ಅವನು ‘ಪೂರ್ವಿಕರ ಪುರಾಣಗಳು’ ಎನ್ನುವನು.

(14) ಅಲ್ಲ, ಅವರು ಮಾಡುತ್ತಿದ್ದ ಕರ್ಮಗಳು ಅವರ ಹೃದಯಗಳಲ್ಲಿ ಕಲೆಯನ್ನುಂಟುಮಾಡಿವೆ.

(15) ಅಲ್ಲ, ಖಂಡಿತವಾಗಿಯೂ ಆ ದಿನದಂದು ಅವರು ತಮ್ಮ ರಬ್‌ನಿಂದ ಮರೆಯಾಗಿಸಲ್ಪಡುವರು.(1368)
1368. ಸತ್ಯವಿಶ್ವಾಸಿಗಳಿಗೆ ಪರಲೋಕದಲ್ಲಿ ಅಲ್ಲಾಹುವನ್ನು ನೇರವಾಗಿ ಕಾಣುವ ಸೌಭಾಗ್ಯವಿದೆ. ಆದರೆ ಈ ಅವಕಾಶವು ಸತ್ಯನಿಷೇಧಿಗಳಿಗೆ ನಿಷಿದ್ಧಗೊಳಿಸಲಾಗಿದೆ.

(16) ತರುವಾಯ ಅವರು ಜ್ವಲಿಸುವ ನರಕಾಗ್ನಿಯಲ್ಲಿ ಪ್ರವೇಶಿಸಿ ಉರಿಯುವವರಾಗುವರು.

(17) ತರುವಾಯ ಹೇಳಲಾಗುವುದು: ‘ನೀವು ನಿಷೇಧಿಸುತ್ತಿದ್ದ ವಿಷಯವು ಇದೇ ಆಗಿದೆ.’

(18) ಅನುಮಾನವೇ ಇಲ್ಲ. ಸಜ್ಜನರ ದಾಖಲೆಯು ಇಲ್ಲಿಯ್ಯೂನ್‍ನಲ್ಲೇ ಇರುವುದು.

(19) ಇಲ್ಲಿಯ್ಯೂನ್ ಎಂದರೆ ಏನೆಂದು ತಮಗೆ ಗೊತ್ತಿದೆಯೇ?

(20) ಅದು ಲಿಖಿತಗೊಳಿಸಲಾದ ಗ್ರಂಥವಾಗಿದೆ.(1369)
1369. ಸಜ್ಜನರ ಕರ್ಮಗಳನ್ನು ದಾಖಲಿಸಲಾದ ಗ್ರಂಥವಾಗಿದೆ ಇಲ್ಲಿಯ್ಯೂನ್ ಎಂದು ವ್ಯಾಖ್ಯಾನಕಾರರು ಹೇಳಿದ್ದಾರೆ.

(21) ಸಾಮೀಪ್ಯ ಪಡೆದವರು ಅದರ ಬಳಿ ಸನ್ನಿಹಿತರಾಗುವರು.(1370)
1370. ‘ಯಶ್‍ಹದು’ ಎಂದರೆ ಸಾಕ್ಷ್ಯವಹಿಸುವನು, ಹಾಜರಾಗುವನು ಇತ್ಯಾದಿ ಅರ್ಥಗಳಿವೆ. ಸಾಮೀಪ್ಯ ಪಡೆದವರು ಎಂದರೆ ಮಲಕ್‍ಗಳು ಎಂದು ಅನೇಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ದಾಖಲೆಗಳ ಸಂಗ್ರಹಕ್ಕೆ ಮಲಕ್‍ಗಳ ಸಾನಿಧ್ಯ ಅಥವಾ ಕಾವಲು ಇರಲಿದೆ ಎಂದರ್ಥ.

(22) ಖಂಡಿತವಾಗಿಯೂ ಸಜ್ಜನರು ಸುಖಾನುಭೂತಿಗಳಲ್ಲಿರುವರು.

(23) ಆಸನಗಳಲ್ಲಿ ಕುಳಿತು ಅವರು ನೋಡುತ್ತಿರುವರು.

(24) ಅವರ ಮುಖಗಳಲ್ಲಿ ಸುಖಾನುಭೂತಿಯ ಹೊಳಪನ್ನು ತಾವು ಗುರುತಿಸುವಿರಿ.

(25) ಮುದ್ರೆ ಹಾಕಲಾದ ಶುದ್ಧ ಮದ್ಯದಿಂದ ಅವರಿಗೆ ಕುಡಿಯಲು ನೀಡಲಾಗುವುದು.

(26) ಅದರ ಮುದ್ರೆಯು ಕಸ್ತೂರಿಯಾಗಿರುವುದು. ಪೈಪೋಟಿ ನಡೆಸುವವರು ಅದಕ್ಕಾಗಿ ಪೈಪೋಟಿ ನಡೆಸಲಿ.

(27) ಅದರ ಮಿಶ್ರಣವು ತಸ್ನೀಮ್ ಆಗಿರುವುದು.

(28) ಅಂದರೆ ಸಾಮೀಪ್ಯ ಪಡೆದವರು ಕುಡಿಯುವ ಒಂದು ಒರತೆ ನೀರು.

(29) ಖಂಡಿತವಾಗಿಯೂ ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ಗೇಲಿ ಮಾಡಿ ನಗುತ್ತಿದ್ದರು.

(30) ಅವರ (ಸತ್ಯವಿಶ್ವಾಸಿಗಳ) ಮುಂದಿನಿಂದ ಹಾದು ಹೋಗುವಾಗ ಅವರು ಪರಸ್ಪರ ಕಣ್ಣು ಮಿಟುಕಿಸುತ್ತಿದ್ದರು.

(31) ಅವರ ಮನೆಯವರ ಬಳಿಗೆ ಮರಳುವಾಗ ಅವರು ಸಂಭ್ರಮಿಸುತ್ತಾ ಮರಳುತ್ತಿದ್ದರು.

(32) ಅವರನ್ನು (ಸತ್ಯವಿಶ್ವಾಸಿಗಳನ್ನು) ಕಾಣುವಾಗ ‘ಖಂಡಿತವಾಗಿಯೂ ಇವರು ದಾರಿಗೆಟ್ಟವರೇ ಆಗಿರುವರು’ ಎನ್ನುತ್ತಿದ್ದರು.

(33) ಅವರ (ಸತ್ಯವಿಶ್ವಾಸಿಗಳ) ಮೇಲೆ ಮೇಲ್ವಿಚಾರಕರನ್ನಾಗಿ ಇವರನ್ನು ಕಳುಹಿಸಲಾಗಿಲ್ಲ.

(34) ಆದರೆ ಅಂದು (ಅಂತ್ಯದಿನದಂದು) ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ಗೇಲಿ ಮಾಡಿ ನಗುವರು.

(35) ಆಸನಗಳಲ್ಲಿ ಕುಳಿತು ಅವರು ನೋಡುತ್ತಿರುವರು.

(36) ಸತ್ಯನಿಷೇಧಿಗಳಿಗೆ ಅವರು ಮಾಡಿರುವುದರ ಪ್ರತಿಫಲವನ್ನು ನೀಡಲಾಗಿದೆಯೋ? ಎಂದು.