(1) ಆಕಾಶವು ಒಡೆದು ಸೀಳುವಾಗ.
(2) ಅದು ಅದರ ರಬ್‌ಗೆ ಶರಣಾಗುವಾಗ. ಅದು (ಹೀಗೆ ಶರಣಾಗುವುದು) ಅದರ ಬಾಧ್ಯತೆಯಾಗಿದೆ.
(3) ಭೂಮಿಯು ವಿಸ್ತರಿಸಲಾಗುವಾಗ.
(4) ಅದರಲ್ಲಿರುವುದನ್ನು (ಹೊರ)ಹಾಕಿ ಅದು ಬರಿದಾಗುವಾಗ.
(5) ಅದು ಅದರ ರಬ್‌ಗೆ ಶರಣಾಗುವಾಗ. ಅದು (ಹೀಗೆ ಶರಣಾಗುವುದು) ಅದರ ಬಾಧ್ಯತೆಯಾಗಿದೆ.(1371)
1371. ಒಂದರಿಂದ ಐದರವರೆಗಿನ ಸೂಕ್ತಿಗಳಲ್ಲಿ ಹೇಳಿದ ವಿಷಯಗಳೆಲ್ಲ ಅಂತ್ಯದಿನದಂದು ಸಂಭವಿಸುವ ಘಟನೆಗಳಾಗಿವೆ.
(6) ಓ ಮನುಷ್ಯನೇ! ನೀನು ನಿನ್ನ ರಬ್‌ನೆಡೆಗೆ ಕಠಿಣ ಪರಿಶ್ರಮ ಮಾಡಿ ತೆರಳುವವನಾಗಿರುವೆ(1372) ಮತ್ತು ಅವನನ್ನು ಭೇಟಿಯಾಗುವವನಾಗಿರುವೆ.
1372. ಒಳಿತು ಅಥವಾ ಕೆಡುಕಾದ ಸಂಗತಿಗಳಿಗಿರುವ ನಿರಂತರ ಪರಿಶ್ರಮದ ನಡುವೆ ಮನುಷ್ಯನು ಮೃತಪಟ್ಟು ಅಲ್ಲಾಹುವಿನ ಬಳಿಗೆ ತೆರಳುತ್ತಾನೆ.
(7) ಆದರೆ (ಪರಲೋಕದಲ್ಲಿ) ಯಾರಿಗೆ ಅವನ ಗ್ರಂಥವನ್ನು ಬಲಗೈಯಲ್ಲಿ ನೀಡಲಾಗುವುದೋ.
(8) ಅವನನ್ನು ಸರಳವಾದ ವಿಚಾರಣೆಗೆ ಗುರಿ ಮಾಡಲಾಗುವುದು.
(9) ಅವನು ತನ್ನ ಮನೆಯವರ ಬಳಿಗೆ ಸಂತೋಷದಿಂದ ಮರಳುವನು.
(10) ಆದರೆ ಯಾರಿಗೆ ಅವನ ಗ್ರಂಥವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಗುವುದೋ.
(11) ಅವನು ‘ಅಯ್ಯೋ! ನನ್ನ ದುರದೃಷ್ಟವೇ!’ ಎಂದು ರೋದಿಸುವನು.
(12) ಅವನು ಧಗಧಗನೆ ಉರಿಯುವ ನರಕಾಗ್ನಿಯಲ್ಲಿ ಪ್ರವೇಶಿಸಿ ಉರಿಯುವನು.
(13) ಖಂಡಿತವಾಗಿಯೂ ಅವನು ಅವನ ಮನೆಯವರ ಜೊತೆಗೆ ಸಂತೋಷದಿಂದ ಕಳೆಯುವವನಾಗಿದ್ದನು.
(14) ತಾನು (ಅಲ್ಲಾಹುವಿನೆಡೆಗೆ) ಮರಳಿ ಬರಲಾರೆನೆಂದೇ ಅವನು ಭಾವಿಸಿದ್ದನು.
(15) ಹೌದು! ಖಂಡಿತವಾಗಿಯೂ ಅವನ ರಬ್ ಅವನನ್ನು ವೀಕ್ಷಿಸುವವನಾಗಿರುವನು.
(16) ಆದರೆ ನಾನು ಅಸ್ತಮಾನ ಶೋಭೆಯ ಮೇಲೆ ಆಣೆಯಿಟ್ಟು ಹೇಳುವೆನು.
(17) ರಾತ್ರಿ ಮತ್ತು ಅದು ಒಟ್ಟು ಸೇರಿಸುವುದರ ಮೇಲೆ.(1373)
1373. ಮುಂಜಾನೆ ಗೂಡು ತೊರೆದು ಹೊರಹೋಗುವ ಜೀವರಾಶಿಗಳು, ಮನೆ ಬಿಟ್ಟು ವಿವಿಧ ಕೆಲಸಗಳೆಡೆಗೆ ತೆರಳುವ ಮನುಷ್ಯರು ರಾತ್ರಿ ಗೂಡುಗಳಲ್ಲಿ ಮತ್ತು ಮನೆಗಳಲ್ಲಿ ಒಟ್ಟು ಸೇರುವುದರ ಬಗ್ಗೆಯಾಗಿರಬಹುದು ಇಲ್ಲಿ ಸೂಚಿಸಿರುವುದು.
(18) ಚಂದ್ರನು ಪರಿಪೂರ್ಣತೆಯನ್ನು ಪಡೆಯುವಾಗ ಅದರ ಮೇಲೆ.
(19) ಖಂಡಿತವಾಗಿಯೂ ನೀವು ಹಂತ ಹಂತವಾಗಿ ಮೇಲೇರುತ್ತಿರುವಿರಿ.(1374)
1374. ಮನುಷ್ಯನ ಬದುಕು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಏಳಿಗೆಯಾಗುತ್ತಿರುತ್ತದೆ. ಭೌತಿಕ ಮತ್ತು ಅಧ್ಯಾತ್ಮಿಕವಾದ ಎಲ್ಲ ಪ್ರಗತಿಗಳೂ ಹಂತ ಹಂತವಾಗಿಯೇ ಜರಗುತ್ತವೆ.
(20) ಆದರೆ ಅವರಿಗೇನಾಗಿದೆ? ಅವರು ವಿಶ್ವಾಸವಿಡುವುದಿಲ್ಲ.
(21) ಅವರಿಗೆ ಕುರ್‌ಆನ್ ಓದಿಕೊಡಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.(1375)
1375. ಈ ಸೂಕ್ತಿಯನ್ನು ಪಾರಾಯಣ ಮಾಡಿದಾಗ ಪ್ರವಾದಿ(ಸ) ರವರು ಸಾಷ್ಟಾಂಗ ಮಾಡಿದ್ದಾಗಿ ಹದೀಸ್‍ಗಳಲ್ಲಿ ವರದಿಯಾಗಿದೆ. ‘ಲಾ ಯಸ್ಜುದೂನ್’ ಎಂಬ ಪದಕ್ಕೆ ಅವರು ವಿನಮ್ರತೆ ತೋರುವುದಿಲ್ಲ ಎಂದೂ ಕೆಲವರು ಅರ್ಥ ನೀಡಿದ್ದಾರೆ.
(22) ಆದರೆ ಅವಿಶ್ವಾಸಿಗಳು ನಿಷೇಧಿಸುತ್ತಿರುವರು.
(23) ಅವರು ಮನಸ್ಸುಗಳಲ್ಲಿ ಸಂಗ್ರಹಿಸಿಡುವುದರ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿಯುವವನಾಗಿರುವನು.
(24) ಆದ್ದರಿಂದ (ಓ ಪ್ರವಾದಿಯವರೇ!) ಅವರಿಗೆ ಯಾತನಾಮಯ ಶಿಕ್ಷೆಯೊಂದರ ಬಗ್ಗೆ ಶುಭವಾರ್ತೆ ತಿಳಿಸಿರಿ.
(25) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರ ಹೊರತು. ಅವರಿಗೆ ಕಡಿದು ಹೋಗದ ಪ್ರತಿಫಲವಿದೆ.