88 - Al-Ghaashiya ()

|

(1) (ಓ ಪ್ರವಾದಿಯವರೇ!) ಆ ಮುಚ್ಚುವ ಘಟನೆಗೆ ಸಂಬಂಧಿಸಿದ(1383) ವೃತ್ತಾಂತವು ತಮಗೆ ತಲುಪಿದೆಯೇ?
1383. ಭಯ ಮತ್ತು ಆಘಾತಗಳು ಎಲ್ಲರನ್ನೂ ಆವರಿಸುವ ಅಂತ್ಯದಿನ.

(2) ಆ ದಿನದಂದು ಕೆಲವು ಮುಖಗಳು ವಿನಮ್ರವಾಗಿರುವುವು.

(3) ಪರಿಶ್ರಮದಿಂದ ಬಳಲಿರುವುವು.(1384)
1384. ಅಲ್ಲಾಹುವಿನ ವಿಚಾರಣೆ ಮತ್ತು ಶಿಕ್ಷೆಯ ಬಗ್ಗೆಯಿರುವ ಭಯದ ನಿಮಿತ್ತ ಆ ಮುಖಗಳು ಕೆಳಭಾಗಕ್ಕೆ ಬಾಗಿರುವುವು. ಅವರು ಭೌತಿಕ ಉದ್ದೇಶಗಳಿಗೋಸ್ಕರ ಪರಿಶ್ರಮಪಟ್ಟವರೋ ಅಥವಾ ಪ್ರಮಾದಪೂರಿತ ಧಾರ್ಮಿಕ ಸಂಪ್ರದಾಯಗಳನ್ನು ನಿರ್ವಹಿಸಿ ದಣಿದವರೋ ಆಗಿರುವರು. ಆದರೆ ಅಂತ್ಯದಿನದಂದು ಅದಾವುದೂ ಅವರಿಗೆ ಪ್ರಯೋಜನಪಡದು.

(4) ಅವು ತೀವ್ರ ಶಾಖವನ್ನು ಹೊಂದಿರುವ ಅಗ್ನಿಯನ್ನು ಪ್ರವೇಶಿಸುವುವು.

(5) ಕೊತಕೊತ ಕುದಿಯುವ ಒಂದು ಒರತೆಯಿಂದ ಅವರಿಗೆ ಕುಡಿಸಲಾಗುವುದು.

(6) ದರೀಅ್‌ನಿಂದಲೇ(1385) ಹೊರತು ಅವರಿಗೆ ಇನ್ನಾವುದೇ ಆಹಾರವೂ ಇಲ್ಲ.
1385. ‘ದರೀಅ್’ ಎಂದರೆ ಕಡು ಕಹಿಯನ್ನು ಹೊಂದಿರುವ ಒಂದು ಸಸ್ಯವೆಂದು ಅನೇಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(7) ಅದು ಪೋಷಣೆ ನೀಡಲಾರದು. ಹಸಿವೆಯನ್ನೂ ನಿವಾರಿಸಲಾರದು.

(8) ಅಂದು ಕೆಲವು ಮುಖಗಳು ತೀಕ್ಷ್ಣವಾಗಿ ಹೊಳೆಯುತ್ತಿರುವುವು.

(9) ಅವುಗಳ ಪರಿಶ್ರಮದ ಬಗ್ಗೆ ಸಂತೃಪ್ತವಾಗಿರುವುವು.(1386)
1386. ಇಹಲೋಕದಲ್ಲಿ ತಾವು ಮಾಡಿದ ಕರ್ಮಗಳು ಸಫಲವಾಗಿರುವುದರಲ್ಲಿ ಅವರು ಸಂತುಷ್ಟರಾಗುವರು.

(10) ಉನ್ನತ ಸ್ವರ್ಗದಲ್ಲಿ.

(11) ಅಲ್ಲಿ ಅನಾವಶ್ಯಕವಾದ ಯಾವುದೇ ಮಾತನ್ನೂ ಅವರು ಆಲಿಸಲಾರರು.

(12) ಅದರಲ್ಲಿ ಹರಿಯುತ್ತಿರುವ ತೊರೆಯಿದೆ.

(13) ಅಲ್ಲಿ ಎತ್ತರಿಸಿಡಲಾದ ಮಂಚಗಳಿವೆ.

(14) ಸಿದ್ಧವಾಗಿಡಲಾದ ಲೋಟಗಳಿವೆ.

(15) ಸಾಲು ಸಾಲಾಗಿ ಇಡಲಾದ ದಿಂಬುಗಳಿವೆ.

(16) ಹರಡಲಾದ ಜಮಖಾನೆಗಳಿವೆ.

(17) ಅವರು ಒಂಟೆಯೆಡೆಗೆ ನೋಡುವುದಿಲ್ಲವೇ?(1387) ಅದನ್ನು ಹೇಗೆ ಸೃಷ್ಟಿಸಲಾಗಿದೆಯೆಂದು?
1387. ಮರುಭೂಮಿಯಲ್ಲಿ ಮನುಷ್ಯನ ಅಗತ್ಯಗಳನ್ನು ನೆರವೇರಿಸುವ ಮತ್ತು ಮರುಭೂಮಿಯ ಪ್ರಕೃತಿಗೆ ಹೊಂದಾಣಿಕೆಯಾಗುವ ಒಂಟೆಯ ಶರೀರ ರಚನೆಯು ಅದ್ಭುತಕರವಾಗಿದೆ. ಒಂಟೆಯನ್ನು ಸೂಕ್ಷ್ಮವಾಗಿ ವೀಕ್ಷಿಸುವ ಯಾರಿಗೂ ಸೃಷ್ಟಿಕರ್ತನ ಸೃಷ್ಟಿ ವೈಭವದ ಬಗ್ಗೆ ಆಲೋಚಿಸದಿರಲು ಸಾಧ್ಯವಿಲ್ಲ.

(18) ಆಕಾಶದೆಡೆಗೆ (ಅವರು ನೋಡುವುದಿಲ್ಲವೇ)? ಅದನ್ನು ಹೇಗೆ ಎತ್ತರಿಸಲಾಗಿದೆಯೆಂದು?

(19) ಪರ್ವತಗಳೆಡೆಗೆ (ಅವರು ನೋಡುವುದಿಲ್ಲವೇ)? ಅವುಗಳನ್ನು ಹೇಗೆ ನಾಟಿ ನಿಲ್ಲಿಸಲಾಗಿದೆಯೆಂದು?

(20) ಭೂಮಿಯೆಡೆಗೆ (ಅವರು ನೋಡುವುದಿಲ್ಲವೇ)? ಅದನ್ನು ಹೇಗೆ ಹರಡಲಾಗಿದೆಯೆಂದು?(1388)
1388. ಭೂಮಿಯು ಅತಿವೇಗದಲ್ಲಿ ಸುತ್ತುತ್ತಿರುವ ಒಂದು ಗ್ರಹವಾಗಿದೆ. ಆದರೂ ಅದರ ಮೇಲ್ಮೈಯು ಮನುಷ್ಯನ ಎಲ್ಲ ವಿಧದ ಅಗತ್ಯಗಳಿಗೂ ಸಹಾಯಕವಾಗುವ ರೀತಿಯಲ್ಲಿ ವಿಶಾಲವಾಗಿ ಹರಡಲಾಗಿದೆ.

(21) ಆದ್ದರಿಂದ (ಓ ಪ್ರವಾದಿಯವರೇ!) ತಾವು ಉಪದೇಶ ನೀಡಿರಿ. ತಾವು ಒಬ್ಬ ಉಪದೇಶಕರು ಮಾತ್ರವಾಗಿರುವಿರಿ.

(22) ತಾವು ಅವರ ಮೇಲೆ ಅಧಿಕಾರ ಚಲಾಯಿಸ ಬೇಕಾದವರಲ್ಲ.

(23) ಆದರೆ ಯಾರಾದರೂ ವಿಮುಖನಾದರೆ ಮತ್ತು ಅವಿಶ್ವಾಸವಿಟ್ಟರೆ.

(24) ಅಲ್ಲಾಹು ಅವನನ್ನು ಮಹಾ ಶಿಕ್ಷೆಯಿಂದ ಶಿಕ್ಷಿಸುವನು.

(25) ಖಂಡಿತವಾಗಿಯೂ ಅವರ ಮರಳುವಿಕೆಯು ನಮ್ಮೆಡೆಗಾಗಿದೆ.

(26) ತರುವಾಯ ಖಂಡಿತವಾಗಿಯೂ ಅವರ ವಿಚಾರಣೆ ಮಾಡುವುದು ನಮ್ಮ ಬಾಧ್ಯತೆಯಾಗಿದೆ.