(1) ರಾತ್ರಿಯ ಮೇಲಾಣೆ! ಅದು ಮುಚ್ಚುವಾಗ.
(2) ಹಗಲಿನ ಮೇಲಾಣೆ! ಅದು ಪ್ರತ್ಯಕ್ಷವಾಗುವಾಗ.
(3) ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದ ವಿಧಾನದ ಮೇಲಾಣೆ!
(4) ಖಂಡಿತವಾಗಿಯೂ ನಿಮ್ಮ ಪರಿಶ್ರಮವು ವಿಭಿನ್ನ ರೂಪದಲ್ಲಿರುವುದಾಗಿದೆ.
(5) ಆದರೆ ಯಾರು ದಾನಧರ್ಮ ಮಾಡಿ ಭಯಭಕ್ತಿ ಪಾಲಿಸುತ್ತಾನೋ.
(6) ಮತ್ತು ಅತ್ಯುತ್ತಮವಾಗಿರುವುದನ್ನು ನಿಜಪಡಿಸುತ್ತಾನೋ.
(7) ಅವನಿಗೆ ನಾವು ಅತ್ಯಂತ ಸುಗಮವಾಗಿರುವುದರೆಡೆಗೆ ಅನುಕೂಲ ಮಾಡಿಕೊಡುವೆವು.(1405)
1405. ಔದಾರ್ಯ ಮತ್ತು ಧರ್ಮನಿಷ್ಠೆಯನ್ನು ಹೊಂದಿರುವ ಮತ್ತು ಉತ್ತಮ ಜೀವನಶೈಲಿಯನ್ನು ಅಂಗೀಕರಿಸುವವನಿಗೆ ಅಲ್ಲಾಹು ಬದುಕನ್ನು ಸುಗಮಗೊಳಿಸುವನು ಎಂದರ್ಥ.
(8) ಆದರೆ ಯಾರು ಜಿಪುಣತೆ ತೋರಿಸಿ ಸ್ವಯಂ ಪರ್ಯಾಪ್ತತೆಯನ್ನು ಪ್ರಕಟಿಸುತ್ತಾನೋ.
(9) ಮತ್ತು ಅತ್ಯುತ್ತಮವಾಗಿರುವುದನ್ನು ನಿಷೇಧಿಸುತ್ತಾನೋ.
(10) ಅವನಿಗೆ ನಾವು ಅತ್ಯಂತ ಕಷ್ಟವಾಗಿರುವುದರೆಡೆಗೆ ಅನುಕೂಲ ಮಾಡಿಕೊಡುವೆವು.(1406)
1406. ಅತ್ಯಂತ ಪ್ರಯಾಸಕರ ಬದುಕಿಗೆ ಅಲ್ಲಾಹು ಅವನನ್ನು ಸಾಗಿಸುವನು ಎಂದರ್ಥ.
(11) ಅವನು ನಾಶವಾಗಿ ಹೋಗುವಾಗ ಅವನ ಸಂಪತ್ತು ಅವನಿಗೆ ಪ್ರಯೋಜನಪಡದು.
(12) ಖಂಡಿತವಾಗಿಯೂ ಮಾರ್ಗದರ್ಶನ ಮಾಡುವುದು ನಮ್ಮ ಬಾಧ್ಯತೆಯಾಗಿದೆ.
(13) ಖಂಡಿತವಾಗಿಯೂ ಪರಲೋಕ ಮತ್ತು ಇಹಲೋಕಗಳು ನಮಗಿರುವುದಾಗಿವೆ.
(14) ಆದ್ದರಿಂದ ಧಗಧಗಿಸುವ ಅಗ್ನಿಯ ಬಗ್ಗೆ ನಾನು ನಿಮಗೆ ಎಚ್ಚರಿಕೆ ನೀಡಿರುವೆನು.
(15) ಅತ್ಯಂತ ದುಷ್ಟನ ಹೊರತು ಯಾರೂ ಅದನ್ನು ಪ್ರವೇಶಿಸಲಾರರು.
(16) ಅಂದರೆ ನಿಷೇಧಿಸಿದವನು ಮತ್ತು ವಿಮುಖನಾಗಿ ಹೋದವ ಹೊರತು.
(17) ಅತ್ಯಧಿಕ ಭಯಭಕ್ತಿಯುಳ್ಳವನನ್ನು ಅದರಿಂದ ದೂರೀಕರಿಸಲಾಗುವುದು.
(18) ಅಂದರೆ ಪರಿಶುದ್ಧಿ ಗಳಿಸುವುದಕ್ಕಾಗಿ ತನ್ನ ಸಂಪತ್ತನ್ನು ವ್ಯಯಿಸುವವನನ್ನು.
(19) ಪ್ರತ್ಯುಪಕಾರ ಮಾಡಬೇಕಾದ ಯಾವುದೇ ಅನುಗ್ರಹವೂ ಅವನ ಬಳಿ ಯಾರಿಗೂ ಇಲ್ಲ. (1407)
1407. ಆತ್ಮಶುದ್ಧಿಯನ್ನು ಬಯಸುವ ವ್ಯಕ್ತಿ ಯಾರಿಗೆ ಯಾವುದೇ ಸಹಾಯ ಮಾಡಿದರೂ ಅದು ಪ್ರತ್ಯುಪಕಾರ ಸಿಗಬೇಕು ಎಂಬ ಉದ್ದೇಶದಿಂದ ಆಗಿರಲಾರದು. ಅಲ್ಲಾಹುವಿನ ಸಂತೃಪ್ತಿಯನ್ನು ಆಕಾಂಕ್ಷಿಸಿ ಮಾತ್ರವಾಗಿರುವುದು ಎಂದರ್ಥ.
(20) ಅತ್ಯುನ್ನತನಾಗಿರುವ ಅವನ ರಬ್ನ ಸಂತೃಪ್ತಿಯನ್ನು ಅರಸುವುದರ ಹೊರತು.
(21) ಅವನು ತರುವಾಯ ಸಂತೃಪ್ತನಾಗುವನು.