(1) ಗ್ರಂಥದವರಲ್ಲಿ ಮತ್ತು ಬಹುದೇವವಿಶ್ವಾಸಿಗಳಲ್ಲಿ ಸೇರಿದ ಸತ್ಯನಿಷೇಧಿಗಳು ಸ್ಪಷ್ಟವಾದ ಪುರಾವೆ ಅವರ ಬಳಿಗೆ ಬರುವ ತನಕ (ಸತ್ಯನಿಷೇಧದಿಂದ) ಬೇರ್ಪಡುವವರಾಗಿರಲಿಲ್ಲ.
(2) ಪರಿಶುದ್ಧಿ ನೀಡಲಾದ ಪುಟಗಳನ್ನು ಓದಿಕೊಡುವ ಅಲ್ಲಾಹುವಿನ ವತಿಯ ಒಬ್ಬ ಸಂದೇಶವಾಹಕರು (ಬರುವ ತನಕ).
(3) ಅದರಲ್ಲಿ ನೇರವಾದ ದಾಖಲೆಗಳಿವೆ.
(4) ಗ್ರಂಥ ನೀಡಲಾದವರು ಅವರ ಬಳಿಗೆ ಸ್ಪಷ್ಟವಾದ ಪುರಾವೆಯು ಬಂದ ಬಳಿಕವೇ ಹೊರತು ಭಿನ್ನರಾಗಿರಲಿಲ್ಲ.(1421)
1421. ಗ್ರಂಥ ನೀಡಲಾದವರು ಪರಸ್ಪರ ತಮ್ಮಲ್ಲಿ ಭಿನ್ನಾಭಿಪ್ರಾಯ ತಾಳಿರುವುದು ಪುರಾವೆ ಲಭ್ಯವಾಗದ ಕಾರಣದಿಂದಲ್ಲ. ಬದಲಾಗಿ ಅವರ ಮಧ್ಯೆ ಇದ್ದ ಹಗೆತನ ಮತ್ತು ಹಠಮಾರಿತನದಿಂದಾಗಿತ್ತು.
(5) ಶರಣಾಗತಿಯನ್ನು ಅಲ್ಲಾಹುವಿಗೆ ಮಾತ್ರ ಸಮರ್ಪಿಸಿ, ಋಜುಮನಸ್ಕರಾಗಿರುತ್ತಾ ಅವನನ್ನು ಆರಾಧಿಸಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ಹೊರತು ಅವರೊಂದಿಗೆ ಇನ್ನೇನೂ ಆದೇಶಿಸಲಾಗಿಲ್ಲ. ನೇರವಾದ ಧರ್ಮವು ಅದೇ ಆಗಿದೆ.
(6) ಖಂಡಿತವಾಗಿಯೂ ಗ್ರಂಥ ನೀಡಲಾದವರಲ್ಲಿ ಮತ್ತು ಬಹುದೇವವಿಶ್ವಾಸಿಗಳಲ್ಲಿ ಸೇರಿದ ಸತ್ಯನಿಷೇಧಿಗಳು ನರಕಾಗ್ನಿಯಲ್ಲಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರು ಸೃಷ್ಟಿಗಳಲ್ಲೇ ನಿಕೃಷ್ಟರಾಗಿರುವರು.
(7) ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ ಅವರು ಸೃಷ್ಟಿಗಳಲ್ಲೇ ಉತ್ತಮರಾಗಿರುವರು.
(8) ಅವರಿಗೆ ಅವರ ರಬ್‌ನ ಬಳಿಯಿರುವ ಪ್ರತಿಫಲವು ತಳಭಾಗದಿಂದ ನದಿಗಳು ಹರಿಯುವ, ಶಾಶ್ವತವಾಸಕ್ಕಿರುವ ಸ್ವರ್ಗೋದ್ಯಾನಗಳಾಗಿವೆ. ಅವರು ಅದರಲ್ಲಿ ಎಂದೆಂದಿಗೂ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಿರುವನು ಮತ್ತು ಅವರು ಅವನ (ಅಲ್ಲಾಹುವಿನ) ಬಗ್ಗೆ ಸಂತೃಪ್ತರಾಗಿರುವರು. ಅದು ಯಾರು ತನ್ನ ರಬ್ಬನ್ನು ಭಯಪಡುವನೋ ಅವನಿಗಿರುವುದಾಗಿದೆ.